ಬಾನಕ್ಕಿ
ಪ್ಯಾಸರಿಫಾರ್ಮೀಸ್ ಗಣದ, ಹೀರುಂಡಿನಿಡೀ ಕುಟುಂಬಕ್ಕೆ ಸೇರಿದ ಪಕ್ಷಿ (ಮಾರ್ಟಿನ್). ಧ್ರುವಪ್ರದೇಶ ಮತ್ತು ನ್ಯೂಜಿóಲೆಂಡ್ ದೇಶವನ್ನು ಬಿಟ್ಟರೆ ಪ್ರಪಂಚದ ಉಳಿದೆಲ್ಲಕಡೆಗಳಲ್ಲೂ ಕಾಣದೊರೆಯುತ್ತದೆ. ಪುಟ್ಟಗಾತ್ರದ ಹಕ್ಕಿ. ದೇಹದ ಬಣ್ಣ ನೀಲಿ ಮಿಶ್ರಿತ ಕಪ್ಪು. ಎದೆಯ ಭಾಗ ಮಾತ್ರ ಬಿಳಿ. ಇದು ಕೀಟಾಹಾರಿ. ದಿನದ ಬಹುಭಾಗವನ್ನು ಆಹಾರಾನ್ವೇಷಣೆಯಲ್ಲಿ ಹಾರಾಡುತ್ತ ಕಳೆಯುತ್ತದೆ. ಕಟ್ಟಡಗಳ ಮೇಲೆ ಮತ್ತು ವಿದ್ಯುತ್ ತಂತಿಗಳ ಮೇಲೆ ಕುಳಿತು ವಿಶ್ರಮಿಸುವುದು ಸಾಮಾನ್ಯ ನೋಟ. ಇದು ಬಲಸೆ ಹೋಗುವ ಪರಿಪಾಟ ತೋರುತ್ತದೆ. ಮನೆಯ ಮಾಡುಗಳಲ್ಲಿ, ಗೋಡೆಯ ಪೊಟರುಗಳಲ್ಲಿ ಮತ್ತು ಸೇತುವೆಯ ಅಡಿಯಲ್ಲಿ ಕಡ್ಡಿ, ಮಣ್ಣು ಉಪಯೋಗಿಸಿ ಗೂಡುಕಟ್ಟುತ್ತದೆ. ಗೂಡಿನ ಒಳಭಾಗಕ್ಕೆ ತುಪ್ಪಳ, ಗರಿ ಮತ್ತು ಮೆದು ಹುಲ್ಲುಗಳ ಲೇಪನ ಮಾಡುವುದುಂಟು. ಒಮ್ಮೆಗೆ 4 ಅಥವಾ 5 ಮೊಟ್ಟೆ ಇಟ್ಟು ಕಾವು ಕೊಡುತ್ತದೆ. ರೆಕ್ಕೆ ಬಲಿತ ಮರಿಗಳು ಚಳಿಗಾಲದಲ್ಲಿ ದಕ್ಷಿಣಾಭಿಮುಖವಾಗಿ ವಲಸೆ ಹೋಗುತ್ತವೆ. 

ಬಾನಕ್ಕಿ ಕೀಟಗಳನ್ನು ತಿಂದು ಬದುಕುವುದರಿಂದ ಮನುಷ್ಯನಿಗೆ ಉಪಕಾರಿ.	(ಎಂ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ